Archive for ಅಕ್ಟೋಬರ್, 2008

ಸುಮ್ಮ ಸುಮ್ಮನೆ ಮುನಿಸು
ಕಾರಣ ಮೀನ ಹೆಜ್ಜೆ
ಎಷ್ಟೊಂದು ರಂಪ?

ಶೆಲ್ಫಿನ ಬುಕ್ಕುಗಳೆಲ್ಲ
ಚೆಲ್ಲಾಪಿಲ್ಲಿ
ಮೊಬೈಲಿನ ಮುಖ
ಜಜ್ಜಿ ಹೋಗಿದೆ.
ಬಿಸಾಡಿದ್ದು ನಾನೇ, ಗೊತ್ತಿದೆ.

ಅಗೋ,
ಮೂಲೆಯಲ್ಲಿ ಚೂರುಚೂರಾಗಿ
ಬಿದ್ದಿರುವ ನಿನ್ನ ಚಿತ್ರ
ನನ್ನ ಕೋಪ ಹಾಗೇ,
ತೀರಾ ವಿಚಿತ್ರ.

ಕರೆನ್ಸಿ ಕರಗಿದ ಹೊತ್ತಲ್ಲಿ
ನನ್ನ ಕರಕರೆ.
ನಿನ್ನ ಸಹನೆ
ಮೆಚ್ಚುವಂಥದ್ದೇ ಬಿಡು.

ಬಗ್ಗಡವೆದ್ದ ನನ್ನನ್ನ
ನೀ ಹಾಗೆ,
ರಾಡಿ ನೀರಿನ ಬಕೆಟಿನ ಹಾಗೆ
ತನಗೆ ತಾನೆ ತಿಳಿಯಾಗಲೆಂದು
ಬಿಟ್ಟು ಹೋಗಲಿಲ್ಲ ಸದ್ಯ!

ಬರೀ ಮುಂಗುರುಳು ತೀಡಿ,
ಅಮ್ಮನ ಹಾಗೊಂದು
ಹಣೆಮುತ್ತನಿಟ್ಟಿದ್ದೆ
ಸಾಕಾಯ್ತು ನನಗೆ.

ಈಗ,
ಈ ಹೊತ್ತಲ್ಲಿ
ಒಬ್ಬಳೇ ಕುಂತ ನನಗೆ ನಾಚಿಕೆ.
ಗೊತ್ತಿದೆ.
ನನ್ನ ಕೋಪಕ್ಕೆ
ತಲೆ ಬುಡವಿಲ್ಲ.

ಹೀಗೆಲ್ಲ ನನ್ನ
ಸಹಿಸಿ ಸಹಿಸಿಯೇ
ಯಾಕೆ ಕೆಡಿಸುತ್ತಿದ್ದೀ?