ಒಂದು ನೀರವ ರಾತ್ರಿ…

Posted: ಫೆಬ್ರವರಿ 16, 2009 in ಕವಿತೆ
ಟ್ಯಾಗ್ ಗಳು:,

ಇದು,
ಅದೇ ನೀರವ ರಾತ್ರಿ…
ಗೂಬೆ ಕೂಗುವ ಸದ್ದು.

ದೂ  ರ  ದ ಕಬ್ಬಿನ ಗದ್ದೆಯಲ್ಲಿ
ಊಳಿಡುತ್ತಿರುವ ನರಿಗಳ ಧ್ವನಿ,
ನನ್ನೆದೆಯಲ್ಲಿ ಪ್ರತಿಧ್ವನಿ.

ಈ ರಾತ್ರಿ,
ಚಂದಿರನ ಮುಖದಲ್ಲಿ
ಸೂತಕದ ಛಾಯೆ.
ಆಕಾಶ
ವಿಷ ಕುಡಿದೇ ನೀಲಿಗಟ್ಟಿದೆಯೇನೋ
ಅನ್ನುವಂತೆ…
ನಕ್ಷತ್ರಗಳು ಕೂಡ
ಅಂಗಳ ಬಿಟ್ಟು ನಡೆದಿವೆ,
ನನ್ನ ಹಾಗೆ
ಚಂದಿರ ಕೂಡ ಒಬ್ಬಂಟಿ.

ನಾನಿಲ್ಲಿ ಹೀಗೆ,
ಸರಿ ರಾತ್ರಿಯಲ್ಲಿ
ಹಳದಿ ಹೂಗಳನ್ನ ಜೋಡಿಸಿಡುತ್ತ
ಕುಳಿತಿದ್ದೇನೆ.
ಕಾಯುತ್ತಿದ್ದೇನೆ;
ಕ್ಯಾಲೆಂಡರಿನ ಹಾಳೆ ತಿರುವಲು,
ನೀ ಬರುವ ದಿನ ಊಹಿಸಿ
ತಿಂಗಳ ದಿನ ತಾಳೆ ನೋಡಲು.

ಸಿಹಿ ಕಬ್ಬು ಮೆದ್ದ ನರಿಗಳು
ಊಳಿಡುತ್ತಲೇ ಇವೆ,
ಬಾಯಿಗೆ ರಕ್ತ ಮೆತ್ತಿಕೊಂಡಿದೆ.

ಜಾಣ ಗೂಬೆಗೆ ಪೂರಾ ಎಚ್ಚರ.
ಸಾಕ್ಷ್ಯಕ್ಕೆ ಹೆದರಿ
ಕಣ್ಣು ಮುಚ್ಚಿ ಕುಳಿತಿದೆ.

Advertisements

ಮಿಂಚು ಹುಳು

ಚಂದ್ರನ ಮೋಹಿಸಿದ
ಹುಳುಗಳು
ಬೆಳಕಿನ ಬಸಿರು ಹೊತ್ತಿವೆ.
~

ಬೆಂಕಿಯಿಲ್ಲದ
ಬೆಳಕು,
ಬುದ್ಧನಿಗೆ ಖುಷಿಯಾಗಿದೆ.

ಜೀವದ ಹಣತೆಗಳು
ಬೆಳಕು ಹೊತ್ತು
ಹಾರಿವೆ!
~

ಅಗೋ!
ಬೆಳಕಿನ ಹನಿಗೆ
ರೆಕ್ಕೆ ಮೂಡಿದೆ!!
~

ಕತ್ತಲಲ್ಲಿ
ಸೂರ್ಯನ ಕಣ್ಣೀರು,
ಮೈದಳೆಯಿತು
ಮಿಂಚುಹುಳು.
~

ನಕ್ಷತ್ರಗಳಿಗೆ
ಮಣ್ಣ ಮೋಹ,
ಶಾಪಕ್ಕೆ ಹುಳುವಾದವು!
~

ಬೆನ್ನಲ್ಲಿ ಬೆಳಕು,
ಮಿಂಚುಹುಳು
ದಾರಿತಪ್ಪುತ್ತಿದೆ.
~

ಅವಳ ಕಣ್ಣ
ಹೊರಳಿನೆದುರು
ಮಿಂಚುಹುಳು
ಮಂಕಾಯಿತು!
~

ಮಿಂಚುಹುಳುಗಳ
ಕುಲುಕುತ್ತ ಹುಡುಗಿ
ಪಗಡೆಯಾಡಿದಳು.

ಬೆಳಕಿನ ಬೆರಗಿಗೆ
ಹುಡುಗ
ಸೋತುಹೋದ!

~ ಅವನು ~

ಅಂವ
ಗೊಮ್ಮಟನಂತೆ
ದಿಗಂಬರ.
ಎಳ್ಳಷ್ಟೂ ಕಪಟ ಹೊದ್ದಿಲ್ಲ.
~

ಅಮಾವಾಸ್ಯೆ
ನನಗೆ ಗೊತ್ತಿಲ್ಲ.
ಮಗ್ಗುಲಲ್ಲಿ
ನಗುವ ಚಂದ್ರನಿದ್ದಾನೆ.
~

ಜಲತರಂಗದ
ಸದ್ದು!
ಅವನೆಲ್ಲೋ
ಮಾತಾಡುತ್ತಿರಬೇಕು…
~

ಸೂರ್ಯನಂಥ ಹುಡುಗ.
ಒಂದು ಕಡೆ ಮುಳುಗುತ್ತಾನೆ,
ಒಂದು ಕಡೆ ಬೆಳಗುತ್ತಾನೆ.
~

ಖುಷಿಯ ಭಂಗಿ
ಕುಡಿದಿರಬೇಕು,
ನಿದ್ದೆಯಲ್ಲೂ ನಗುತ್ತಿದ್ದಾನೆ!
~

ಇಲ್ಲೀಗ ಇರುಳು.
ಗೊತ್ತು ನನಗೆ,
ಸೂರ್ಯ
ಕಾಣದೂರಲ್ಲಿ ಉರಿಯುತ್ತಿದ್ದಾನೆ.
~

ತಾನು ಬುದ್ಧನ ಕೂಸು
ಅನ್ನುತ್ತಾನೆ,
ಜತೆಗಿರದೆ ಹಿಂಸಿಸುತ್ತಾನೆ!
~

ಕಣ್ಣಲ್ಲಿ
ದೀಪ ಹೊತ್ತ ಹುಡುಗ,
ಎದೆಗೆ
ಕಿಚ್ಚು ಹಚ್ಚುತ್ತಿದ್ದಾನೆ…
~

‘ಬೇಡ ಹೋಗೇ’
ಅನ್ನುವ ಹುಲಿ,
ಬೆಕ್ಕಿನಂತೆ
ಕಾಲು ಸುಳಿಯುತ್ತಿದೆ!

~

~ ಕನ್ನಡಿ ~

ಕನ್ನಡಿಗೆ
ಅವಳ ಕಣ್ಣಲ್ಲಿ
ಪ್ರತಿಬಿಂಬವಾಗುವ ಬಯಕೆ!
~

ಮೋಸಹೋಯಿತು ಕನ್ನಡಿ…
ಅವಳ ನಿಜ ರೂಪ
ತೋರಲೇ ಇಲ್ಲ!
~

ಕನ್ನಡಿಗೂ
ಎಡ-ಬಲಗಳ
ಗೊಂದಲ ಕಳೆದಿಲ್ಲ…
~

ಅವನ ಮುಖಗಳ
ಎಣಿಸಲಾರದೆ
ಕನ್ನಡಿ
ನೂರು ಚೂರಯಿತು…
~

ಒಂಟಿ…

ಗೂಡಿಗೆ ಮರಳುತ್ತಿದ್ದೇನೆ.
ಒಂಟಿತನ
ನನಗಾಗಿ ಕಾದು ನಿಂತಿದೆ.
~

ಚುಕ್ಕಿಗಳ ಊರಲ್ಲಿ
ಚಂದ್ರ
ಒಬ್ಬಂಟಿ.
~

ಕದ್ದಿಂಗಳಲ್ಲಿ
ಒಂಟಿ ಕಡಲು
ಭೋರೆಂದು ಅತ್ತಿದೆ.
~

ನೂರು ನದಿ
ಸೇರಿದರೂ
ಕಡಲು ಒಬ್ಬಂಟಿ.
~

 

~ ನದಿ ~

ಒಡ್ಡು ಮೀರಿದ ನದಿ
ದಿಕ್ಕೆಟ್ಟು
ಹರಿಯುತ್ತಿದೆ…
~

ರಭಸದ ನದಿ,
ದಿಕ್ಕು ತಪ್ಪಿದರೆ
ಪ್ರವಾಹ!
~

ನೀರು ಬೇಡಿ
ಕಣ್ಣೀರಿಟ್ಟವರು
ಜಲ ಸಮಾಧಿಯಾಗಿದ್ದಾರೆ.
~

ಹಂಚುತ್ತ
ಹರಿವ ನದಿಗೆ
ಸಾವೆಂಬುದಿಲ್ಲ.
~

ಉಪ್ಪುಕಡಲಿನ
ಅಗಾಧತೆಯಲ್ಲಿ
ಸಿಹಿನೀರು ಕಳೆದುಹೋಯಿತು…
~

ಹರಿಯುತ್ತಲೇ ಇರುವ
ನದಿ,
ಪ್ರತಿಕ್ಷಣ-
ಪ್ರತಿ ಕಣ
ಹೊಸತು!

ನನ್ನೂರಲ್ಲಿ,
ಕಾಣೆಯಾಗಿದ್ದಾನೆ ಸೂರ್ಯ
ದುಃಖ ಉಕ್ಕಿ ಬಂದಂತೆ
ಕಪ್ಪುಗಟ್ಟಿದೆ ಬಾನು.

ಮುದುಡಿ
ಮಲಗಿದ ಹೂವಿನ್ನೂ
ಮೈಮುರಿದು ಎದ್ದಿಲ್ಲ
ರೆಕ್ಕೆ ಬಡಿಯಲು
ಕಾದುಕುಂತ ಹಕ್ಕಿಗೆ
ಬೆರಗು ಕಳೆದಿಲ್ಲ.

ಚಳಿಯ ಬೆಳಗಿಗೆ
ಬಣ್ಣಗಳಿರುವುದಿಲ್ಲ.
ಬಿಡು,
ನೀನಿರದ ಬೇಸಗೆಯಲ್ಲೂ
ಅವು ಇರುವುದಿಲ್ಲ.

ಕಾಣೆಯಾಗಿದ್ದಾನೆ ಸೂರ್ಯ.
ಹೂವಿಗೆ, ಹುಲ್ಲಿಗೆ, ಹುಲ್ಲೆಗೂ
ಅದರ ಚಿಂತೆಯಿಲ್ಲ.
ಗೆಳೆಯಾ,
ಕಾಲವೂ ನಿಲ್ಲುವುದಿಲ್ಲ.

ನಾನಿಲ್ಲಿ ಹೀಗೆ
ಜಡ್ಡು ಮೈ ಹೊತ್ತು
ಎ.ಸಿ.ರೂಮಲ್ಲಿ ಕೂರಬೇಕಿದೆ.
ನಿನ್ನೂರ ಸೂರ್ಯನ್ನ
ಕಳಿಸಿಕೊಡು ಬೇಗ..